ಶ್ರೀ ಮೌನೇಶ್ವರ ವಚನ ಮಾಲಿಕೆ - 788

ಮೌನೇಶ್ವರರ ವಚನಗಳು - 788


"ಲಕ್ಷ್ಮೇಶ್ವರದ ಜಪದ ಬಾವಿಗೆ ಮಣ್ಣು ತಗಿಯಲಿಕ್ಕೆ ಬಡವರು ಬಲ್ಲಿದರು ಬುಟ್ಟಿಯ ಹಿಡಿದುಕೊಂಡು ಹೋಗುವಾಗ, ಅಯ್ಯ ತಾನು ಕೂಡಿದನು. ನಾನು ಬಿಟ್ಟಿಯ ಮಾಡಲೆಂದು ಕೇಳಿದರೆ, ಕೇಳಿದ ಮಾತಿಗೆ ಆರಾದರೇನು ಎಂಬುತ್ತ ಕೊಂಡ ಹೋಗಲಿಕೆ ಅತ್ತಲಿಂದೆ ಇಬ್ಬರು ಬಸುಳಿಪಲ್ಲೆದ ಮೂಟಿಯ ಹೊತ್ತು ಕೊಂಡು ಬರಲಿಕ್ಕೆ ಅಯ್ಯನ ಕಂಡು ಮೂಟಿಯ ಹಾಕಿದರು, ಮೋನಯ್ಯನ ಕರದು ಬಸಳಿಪಲ್ಲೆ ಕೊಳ್ಳಯ್ಯ ಎಂದು ಕೊಟ್ಟರು, ಹಿಡಿದುಕೊಂಡು ಹೋಗಿ ಸರದಾರ ಒಡೆಯರ ಸದರ ಮೇಲೆ ಚೆಲ್ಲಿದನು, ಚೆಲ್ಲಿದರೆ ಹಿಗ್ಯಾಕೊ ದಿವಾನಿ ಎಂದು ಅರಸನು ಆಡಿದನು. ಅಯ್ಯ ದಿವಾನಿಯಾದವರಿಗೆ ಬುದ್ಧಿ ಹೇಳಲಿಕ್ಕೆ ಬಂದೀನಿ. ನಾನು ಫಿರಿಯಾದಿಗೆ ರೋಜೆ ಹೀನಿ, ಎಂದರೆ ದೊರೆಯಂದ, ಚಾರ ಟೋಕರಿ ಕಾಲೊ, ನಾನು ನಾಲ್ಕು ಹೆಡಗಿ ಮೂರು ಹೆಡಗಿ ತಗೆಯಲಿಕ್ಕೆ ಬಂದಿಲ್ಲ. ತಳಮುಟ್ಟ ಬುಡಮುಟ್ಟ ಶೋಧಿಸಿ ಬೇರು ಕಿತ್ತಿ ಬೀಸಾಕಲಿಕ್ಕೆ ಬಂದೀನಿ ಎನುತಲಿ ಹೋಗಿ ಬಾವಿಯ ಒಳಗೆ ಇಳಿದನು. ಇಳಿದು ಮಂದಿಯನೆಲ್ಲ ನಾಲ್ಕು ಕಡಿಗೆ ಸೇರಿವಿ ಮಾಡಿ ನಿಲಿಸಿದನು. ಆಗ ಗುದ್ದಲಿಯಕೊಂಡು ಖೋ ಎಂದು ಕೂಗಿ ಅಗಿದನು, ಮಣ್ಣು ಮಣ್ಣು ಕಡಿಸಿ ಹೊರಾಂಗಣಕ್ಕೆ ಚೆಲ್ಲಿಸಿದನು. ಒಂಬತ್ತು ತಾಸಿಗೆ ಮಣ್ಣು ಕಿತ್ತಿ ಕಡೆಗಾಯಿತು. ಆಗ ಒಂದು ತಾಮ್ರದ ಕೊಡಾ ಸಿಕ್ಕಿತು. ಆಗ ಒಂದು ನೊಗದ ಗಾತ್ರ ಸೆಲೆ ಹೊರಟಿತು. ಆ ತಾಮ್ರದ ಕೊಡವನ್ನು ಮಾರಿಸಿ ಕಡ್ಲೆಯ ತರಿಸಿ ರಾಶಿಯ  ಹೊಯಿಸಿಕೊಂಡನು. ಅರಸು ಅಲ್ಲಿದ್ದವರು ಮೋನಯ್ಯನ ಕಯ್ಯಲಿ ಮಣ್ಣು ತಗಿಸುವರೆ ಎಲ್ಲಿ ಹಾಗೆ ಕರಿಯಿರಿ ಎಂದೆನಲು, ಆಗ ಅಯ್ಯ ಬರುತ ಕಟ್ಟಿಗಿ ಹಿಡಕೊಂಡು ನಿಂತು ಸಾರುತ್ತಾನೆ. ಹೊಟ್ಟೆಗೆ ಇಲ್ಲದವರ ಕೈಲೆ ಬಿಟ್ಟಿಯ ಕೊಂಡರೆ ಇಂತಹ ಪಟ್ಟದ ಅರಸನಿಗೆ ಪ್ರಳಯ ಬಂದೀತೆಂದು ಕಟ್ಟಿಗಿ ಹಿಡಿದು ಇದು ಸಾರಬೇಕೆಂದು ಕೊಟ್ಟು ಕಳುಹಿದನು ಪ್ರಭುದೇವರು. ನಿನ್ನ ಬಿಟ್ಟಿಗೆ ಬಂದಂತಹ ಹೊಲೆಯನೆ ನಾನು, ಪಟ್ಟಗುಡಮ ನಿನಗೆ ತಿಳಿಯಲಿಲ್ಲವೆ. ನಿನ್ನ ರಾಜ್ಯದೊಳಗೆ ಆಡಿದ ಕಾಲವಿಲ್ಲ ಆಳು ಮಕ್ಕಳಿಗೆ ಪಡಿಯಿಲ್ಲವೆಂದು ಕಾಳೆ ಸಾರುತ್ತಾನೆ. ಇದರಾಗಿ ಖೂಳ ನಿನ್ನ ಬದಕು ಕಾನನದ ಬೆಳದಿಂಗಳ ಎಂಬುದನು ಅರಿಯ, ನಿನ್ನ ಹಿಂದಿನ ಸುದ್ದಿ ಮರತ್ಯಾ, ದಂಡದ ಪಾಕಿಗಳನುಂಡು ತಾನು ದಂಡಿಗಿಯನೇರಿಕೊಂಡು ಖಂಡೇದ ಕರಕ್ಕೆ ಲೋಕದ ಮಂಡರೆಂಬವರು ನೀವೀಗಲೆ ಮೋನಪ್ಪಗೆ ಬೊಗಸೆ ತುಂಬ ಕಡ್ಲೆಯ ಕೊಡು ಎಂದು ಆಡಿದನು. ಅರಸನು ಕಡ್ಲಿ ಹಿಡಿದುಕೊಂಡು ಬಂದರೆ ಕಡ್ಲೆಯ ಕುದುರಿಗೆ ಮೇಸಬೇಕು, ಗಿಳಿಗೆ ಮೇಸಬೇಕು ಚಿಕ್ಕವರಿಗೆ ಕೊಡಬೇಕು ಹಿರಿಯರು ಕಡ್ಲೆಯನು ತಿನ್ನಬಾರದು. ನಾಲ್ಕು ದುಡ್ಡು ಪಾಕಿ ಕೊಡು ಎಂದು ಕಳುಹಿದರೆ ಕೈಯಲ್ಲಿ ಕೊಟ್ಟರು, ಆಗ ಅಯ್ಯನೋಡಿ ಅರಸು ಒಲಿದರೆ ಬಡವನಿರಬೇಕು, ಅರಸು ಮುನಿದರೆ ಅವನು ಹೇಳ ಹೆಸರಿಲ್ಲದೆ ಹೋಗಬೇಕು, ನೀನೆಲ್ಲಿ ಕಟ್ಟಿಗೆ ಮಾರಿಕೊಂಡು ತಿಂಬುವರಿಗೆ ಬಿದ್ದಿದ್ದ್ಯಾ(ಹುಟ್ಟಿರುವಿಯೊ) ನಿನ್ನ ಅರಸುತನಕ್ಕೆ ದಾರಿದ್ರ ಬಂದೀತು ಕಾಣು."

ವಚನಾರ್ಥ :-
ಓದುಗ ಹವ್ಯಾಸಿಗರೆ, ಜಗದ್ಗುರು ಶ್ರೀ ಮೌನೇಶ್ವರರು ಎಂಥಹ ಮಹಾನ್ ವಚನಕಾರರೆಂದರೆ, ಅವರು ಬರೆದ ಕೆಲವು ವಚನಗಳು ಅರ್ಥೈಸಲಾಗದಷ್ಟು ಕ್ಲೀಷ್ಟಕರವಾಗಿವೆ. ಹಾಗೂ ಅವರು ಬರೆದಿರುವ ಹಲವಾರು ಗದ್ಯಾತ್ಮಕ ವಚನಗಳ ಸಾಲಿನಲ್ಲಿ ಈ ವಚನವೂ ಸಹ ಕಂಡು ಬರುತ್ತದೆ. ಪ್ರಸ್ತುತ ವಚನವು ಮೌನೇಶ್ವರರ ಕಾಲದಲ್ಲಿ ನಡೆದಂತ ಒಂದು ಪ್ರಸಂಗವೊಂದನ್ನು ಕಟ್ಟಿಕೊಡುತ್ತದೆ. ಜಗದ್ಗುರು ಮೌನೇಶ್ವರರು ಬರೆದಿರುವ ಹಲವಾರು ವಚನಗಳು ಈ ರೀತಿಯ ಕ್ಲೀಷ್ಟತೆಯನ್ನು ಹೊಂದಿವೆ.

Post a Comment

0 Comments