ಶ್ರೀ ಮೌನೇಶ್ವರ ವಚನ ಮಾಲಿಕೆ - 791

ಮೌನೇಶ್ವರರ ವಚನಗಳು - 791

" ವಿಭೂತಿಯ ಧರಿಸಿ ಪಂಚಾಕ್ಷರಿ ಮಂತ್ರ ಓದುತ ಗಾದಿಯ ಮಾತು ಕಲಿತುಕೊಂಡು ವೇದ ಶಾಸ್ತ್ರದಿ ಮಹಾಜ್ಞಾನಿ ಎನಿಸುವ ವಾದಹೀನರಿಗೆ ಒಳ್ಳೆ ವಿಭೂತಿ ದೊರಕುವದೆ ಕಾದ ಬೂದಿಯನೆ ತಂದು ಕಲಿಸಿ ಮುದ್ದಿಯ ಮಾಡಿ ಬಾಜಾರದೊಳಗಿಟ್ಟು ಮಾರುವ ಆಧಾರ ಆಗಮವ ತಿಳಿಯದೆ ನಾನು ಶಿವ ಭಕ್ತ ತಾನು ಶಿವ ಭಕ್ತ ಸೀಮೆಯ ಮೇಲೆ ಶಿವ ಭಕ್ತರಾದರು ಆನೆಯ ಮಹರ್ಬಲವನೇರಿ ಚೆನ್ನಬಸವಣ್ಣ ಬಂದು ಕಾನನದೊಳು ಕರೆದೊಯ್ದು ಕೈಯನೆ ಕಟ್ಟಿ ತೂಗು ಹಾಕಿ ಮಾನಭಂಗ ಮಾಡುವಾಗ ಜವಾಬು ಕೊಡದಿದ್ದರೆ ನಿಮ್ಮ ಬೊಬ್ಬಿಯ ಹೇಳಲವಲ್ಲ ಜೋಕೆಯಿಂದ ತಿಳಿದುಕೊಳ್ಳಿರಿ ವಿಭೂತಿಯ ಪಟ್ಟದವರೆಲ್ಲರೂ, ಬಸವಣ್ಣ "

ವಚನಾರ್ಥ :-
ಇಲ್ಲಿ ವಿಭೂತಿ ಎನ್ನುವುದನ್ನು ಹಣೆಯ ಮೇಲೆ ಧರಿಸುವ ಲಾಂಛನವಾಗಿ ಬಳಸಿದಂತೆ ವಿಭೂತಿ ಪುರುಷ, ಅಂದರೆ ಜ್ಞಾನಿ, ತಿಳಿದವ, ಪಂಡಿತ ಎನ್ನುವ ಅರ್ಥದಂತೆಯೂ ಮೌನೇಶ್ವರರು ಬಳಸಿದ್ದಾರೆ. ವಿಭೂತಿ ಅಂದರೆ ಲಾಂಛನ ಮತ್ತು ಜ್ಞಾನ ತೋರಿಕೆಯದಾಗಬಾರದು. ಕಪಟತನವನ್ನು ಬಿಂಬಿಸಬಾರದು. ಗಿಳಿಪಾಠದಂತೆ ಕಲಿತಜ್ಞಾನ ಅಂಧಾನುಕರಣೆಯ ಆಚರಣೆಗಳು ಮನುಷ್ಯನನ್ನು ಪರಿಪೂರ್ಣವಾಗಿಸಲಾರವು. ಪರಿಪೂರ್ಣತ್ವ ಎನ್ನುವುದು ನಿಜ ಸಾಧನೆಯಿಂದ, ಸ್ವಾನುಭವದಿಂದ ದಕ್ಕುವಂಥದ್ದು. ಇಂತಹ ಅರೆಸಾಧಕರನ್ನು ಪರೀಕ್ಷಿಸಲು ಆನೇ ಮಾರ್ಬಲವನ್ನೇರಿ ಬರುವ ಚೆನ್ನಬಸವಣ್ಣನು ದಟ್ಟಾರಣ್ಯದಲ್ಲಿ ಕರದೊಯ್ದು ಕೈಕಟ್ಟಿ ಗಿಡಕ್ಕೆ ತೂಗುಹಾಕಿ ಮಾನ ಕಳೆಯುವನು, ಶಿಕ್ಷಿಸುವನು. ಒಣವಾದ ತರ್ಕ ಸರಣಿಯ ಬೊಬ್ಬೆಗಿಂತ ಆತ್ಮಜ್ಞಾನ ಪರಿಪೂರ್ಣತ್ವವನ್ನು ಕೊಡುತ್ತದೆ. ಹೀಗಾಗಿ ವಿಭೂತಿ ಪುರುಷರೆಂದು ಬೊಬ್ಬೆ ಹೊಡೆಯುವ ಶುಷ್ಕ ಬುದ್ಧಿ ಜೀವಿಗಳು ಎಚ್ಚರವಾಗಿರಬೇಕೆನ್ನುವುದು ಇಲ್ಲಿನ ಅರ್ಥ.

Post a Comment

0 Comments