ಶ್ರೀ ಮೌನೇಶ್ವರ ವಚನ ಮಾಲಿಕೆ - 790

ಮೌನೇಶ್ವರರ ವಚನಗಳು - 790

"ಗಂಧಾಕ್ಷತೆಯ ಧರಿಸಿ ಸಂಧ್ಯಾವಂದನೆ ಜಪತಪವ ಮಾಡುತ ಕುಂಭಿನಿ ನರಕದೊಳು ಕುಳಿತುಕೊಂಡು ಅಂದ ಚಂದದಿ ಮಹಾಚದುರರೆನಿಸುವ ಹಂದಿ ಮಾನವರಿಗೆ ಒಳ್ಳೆ ಗಂಧಾಕ್ಷತೆ ದೊರಕುವುದೆ ಇಂಜನ ಮಲೆಯೊಳಗೊಂದು ಗಂಧದ ಕೊರಡನೆ ತಂದು ಗಂಧಾಕ್ಷತೆಯ ಮಾಡಿ ಫಣಿಯೊಳು ಕೀಸಿ ಕೀಸಿ ಧರಿಸಿಕೊಂಡ ಮಸಣ ಮಾನವರಿಗೆ ಒಳ್ಳೆ ಗಂಧಾಕ್ಷತೆ ದೊರಕುವುದೆ ಹಸರು ಹಳದಿ ತೊಟ್ಟು ಶಶಿಮುಖದವನು ಚೆನ್ನಬಸವಣ್ಣ ಬಂದು ಗಂಧಾಕ್ಷತೆಯ ಕುಶಲವನು ಕೇಳಲು ಭೇದವ ಹೇಳಿದರೆ ಅಧಿಪತಿಯಂದಪ್ಪಿಕೊಂಬುವನು ಭೇದವ ಹೇಳದಿದ್ದರೆ ನಿಮ್ಮ ಗೂದಿ ಹಾಯ ಬಡಿದು ಯಮನ ಬಾಧೆಗೆ ಹಾಕುವತೆರನ ಬಂತು ಬೇಗನೆ ತಿಳಿದುಕೊಳ್ಳಿರೊ ಗಂಧಾಕ್ಷತೆಯ ಪರಿಯನೆಲ್ಲವ, ಬಸವಣ್ಣ"

ವಚನಾರ್ಥ :-
ಗಂಧಾಕ್ಷತೆಯ ಧರಿಸಿ ಸಂಧ್ಯಾವಂದನೆ ಮಾಡುತ್ತ ಇರುವ ಭೂಮಿಯನ್ನೇ ತಮ್ಮ ಅಜ್ಞಾನ, ಅಂಧಕಾರ, ಮೂಢತನದಿಂದಾಗಿ ನರಕವಾಗಿಸಿಕೊಂಡು ಅಂದ ಚಂದದಿಂದ ಮೆರೆವ ಮಹಾಚತುರರೆನಿಸಿಕೊಂಬುವ ಬ್ರಾಹ್ಮಣರು ಹಂದಿಗಿಂತ ಕಡೆ. ದಟ್ಟಾರಣ್ಯದೊಳಗಿನಿಂದ ಗಂಧದ ಕೊರಡು ತಂದು ತೇದು ತೀಡಿ ತೀಡಿ ಹಣೆಯಲ್ಲಿ ಧರಿಸಿಕೊಂಡರೆ ಪ್ರಯೋಜನವಿಲ್ಲ. ಗಂಧಾಕ್ಷತೆಯನ್ನು ಕುಲ ಲಾಂಛನವಾಗಿ ಬಳಸಿದಂತೆ ಪರಿಪೂರ್ಣತ್ವದ ಗುರುತಾಗಿಯೂ ಮೌನೇಶ್ವರರು ಬಳಸಿದ್ದಾರೆ. ಇಂತಹ ವೇಷಡಂಬಕರನ್ನು ಅಜ್ಞಾನಿಗಳನ್ನು ಪ್ರಶ್ನಿಸಲು ಶಿಕ್ಷಿಸಲು, ಹಸಿರು ಹಳದಿತೊಟ್ಟ ಚಂದ್ರಕಳೆ ಹೊಂದಿದ ಚೆನ್ನಬಸವಣ್ಣ ಬರುವನು. ಬಂದಾಗ ನಿಮ್ಮ ಹುಸಿ ವೇಶವ ಕಂಡು ಗೂದಿ ಹಾಯುವಂತೆ ಬಡಿದು ಯಮಪಾಶಕ್ಕೆ ಹಾಕುವನು. ನೀವು ಜ್ಞಾನಿಗಳೆಂದು ಕಂಡರೆ ನಿಮ್ಮನ್ನು ಸಾಧಕನೆಂದು ಒಪ್ಪಿಕೊಳ್ಳುವನು. ಜೋಕೆಯಿಂದಿರಬೇಕು ಹುಸಿ ಸಲ್ಲದು ಎನ್ನುವ ಎಚ್ಚರಿಕೆ ಇಲ್ಲಿದೆ.

Post a Comment

0 Comments