Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 789

ಮೌನೇಶ್ವರರ ವಚನಗಳು - 789

"ಭಂಡಾರವನ್ನು ಧರಿಸಿ ಅಮ್ಮನ ವಚನಾರ್ಥವನು ಕೊಂಡಾಡುತ್ತ ಅಗ್ನಿ ಕೊಂಡವನೆ ಪೊಕ್ಕು ದೃಷ್ಟ ತಾನೆನಿಸುವ ಖಂಡಗ ಹುಳಕನೆ ಕಾಣದ ತುಂಡ ಮುಂಡಿಗೆ ಒಳ್ಳೆ ಭಂಡಾರ ದೊರಕುವದೆ ಅಂಗಡಿಯೊಳಗಿನ ಅರಿಷಿಣವನ್ನೇ ತಂದು ಗುಂಡುಗಲ್ಲಿಲಿ ಕುಟ್ಟಿ ಪುಡಿಮಾಡಿ ಧರಿಸಿಕೊಂಡು ಎಲ್ಲ ಭಕ್ತರ ವಿಂಗಡಿಯ ಮಾಡಿ ತುತ್ತು ಬುತ್ತಿಗೆ ಆಶೆ ಮಾಡುವ ಮೂಕ ಮುಂಡೆಯರಿಗೆ ಒಳ್ಳೇ ಭಂಡಾರ ದೊರಕುವುದೆ ಅಕ್ಕನಾಗಲಿಯ ಮಗ ಚಿಕ್ಕ ಚೆನ್ನಬಸವಣ್ಣ ಆರ್ಕಸಾಲೆರ ಒಡಲೊಳು ಜನಿಸಿ ರಕ್ಷಿಸುವ ಕರ್ತನಾಗಿ ಬಂದು ಭಂಡಾರದ ಲಕ್ಷಣವನು ಕೇಳಲು ಮಾತಿಗೆ ಮಾತು ಕೊಟ್ಟರೆ ಮಹಾತ್ಮರೆಂಬನು ಮಾತಿಗೆ ಮಾತು ಕೊಡದಿದ್ದರೆ ಹಬ್ಬದ ಹೋತ ಮಾಡಿ ಪೋತರಾಜನ ಕೈಯಲ್ಲಿ ಕೊಟ್ಟು ಭೂಪಾರಕ್ಕೆ ಬಲೆಯ ಹಾಕುವ ತೆರನು ಬಂತು ಜೋಕಿಯಿಂದ ತಿಳಿದುಕೊಳ್ಳಿರಿ ಜೋಗಿ ಗೊರವ ಒಗ್ಗಪ್ಪಗಳು ನಿಮ್ಮ ಭಂಡಾರದ ಲಕ್ಷಣವನ್ನು, ಬಸವಣ್ಣ"

ವಚನಾರ್ಥ :-
ಜೋಗಿ ಗೊರವಪ್ಪ ಒಗ್ಗಪ್ಪಗಳ ಡಾಂಭಿಕತನವನ್ನು ವಚನ ವಿವರಿಸುತ್ತದೆ. ಎಲ್ಲಮ್ಮನ ಕೊಡ ಹೊತ್ತು ಭಂಡಾರ ಚೀಲ ಬಗಲಲ್ಲಿ ಧರಿಸಿ ಭಂಡತನದಿಂದ ಭಂಡಾರ ಹಚ್ಚುತ್ತ ತಿರುಗುವವರು ವೇಷಡಂಬಕರು. ಮನದೊಳಗಿರುವ, ಖಂಡುಗ ಹುಳುಕುಗಳನ್ನು ಕಾಣದೆ ತನ್ನ ತಪ್ಪನ್ನು ಅರಿತುಕೊಳ್ಳದ ತುಂಡುಮುಂಡೆಗೆ(ಗಂಡನಿಲ್ಲ ದವಳು) ಒಳ್ಳೆಯ ಭಂಡಾರ ಅಂದರೆ ಜ್ಞಾನ ಸಂಪತ್ತು ದೊರೆಯಲಾರದು. ಅಂಗಡಿಯ ಅರಿಷಿಣ ತಂದು ಗುಂಡು ಕಲ್ಲಲಿ ಕುಟ್ಟಿ ಹಚ್ಚಿಕೊಂಡು ತುತ್ತು ಬುತ್ತಿಗಾಗಿ ತಿರುಗುವ ಜೋಗತಿಗೆ ಭಂಡಾರದ ನಿಜವಾದ ಫಲ ದೊರಕದು. ಅಕ್ಕಸಾಲೆಯರ ಹೊಟ್ಟೆಯಲಿ ಹುಟ್ಟಿದ ಮೌನಯ್ಯನು ಬಂದು ಭಂಡಾರದ ಲಕ್ಷಣವ ಕೇಳಿದಾಗ ಸರಿಯಾದ ಅರ್ಥ ಹೇಳಿದರೆ ಮಹಾತ್ಮನೆಂದು ಒಪ್ಪಿಕೊಳ್ಳುವನು. ಇರದಿದ್ದರೆ ಹಬ್ಬದ ಹೋತು ಮಾಡಿ ಪೋತರಾಜನ ಕೈಯಲ್ಲಿ ಕೊಟ್ಟು ಭೂಮಿ ಒಡೆಯ(ಶಿವ)ನಿಗೆ ಬಲಿಹಾಕುವನು. ಈ ಮಾತನ್ನು ಎಚ್ಚರಿಕೆಯಿಂದ ಸ್ವೀಕರಿಸಬೇಕೆಂದು ಜೋಗಿ, ಗೊರವ, ಒಗ್ಗಪ್ಪ, ಜೋಗತಿ ಮುಂತಾದ ವೇಷಡಂಬಕರಿಗೆ ಮೌನೇಶ್ವರರು ಹೇಳುತ್ತಾರೆ.

Post a Comment

0 Comments